May 30, 2026
IMG_20260408_204834

 

1. ನೆಹರೂ ನಗರದ ಕನ್ನಡ ಭವನ ವಿವಾದ.

2. ಜಿಲ್ಲಾ ಕಸಾಪ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಆಗ್ರಹ.

3. 6.26 ಕೋಟಿ ವೆಚ್ಚದ ಭವನ ಸರ್ಕಾರಕ್ಕೆ ಸೇರಲಿ.

4. ಗಡಿ ಪ್ರಾಧಿಕಾರದ ಹೆಸರಿನಲ್ಲಿ ತಪ್ಪು ಮಾಹಿತಿ.

 

ಬೆಳಗಾವಿಯ ಕನ್ನಡ ಭವನವನ್ನು ಕೂಡಲೇ ಸರ್ಕಾರ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಕನ್ನಡ ಸಂಘಟನೆಗಳು ಈಗ ಜಿಲ್ಲಾಧಿಕಾರಿಗಳ ಕದ ತಟ್ಟಿವೆ.

ಬೆಳಗಾವಿಯ ನೆಹರೂ ನಗರದಲ್ಲಿ ಸುಮಾರು 6.26 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕನ್ನಡ ಭವನವನ್ನು ಖಾಸಗಿ ಸಂಸ್ಥೆಗೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಸಮಾನ ಮನಸ್ಕ ಕನ್ನಡ ಸಂಘಟನೆಗಳ ವೇದಿಕೆ ಆರೋಪಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಮಂಗಲಾ ಮೆಟಗುಡ್ಡ ಅವರು ಗಡಿ ಅಭಿವೃದ್ಧಿ ಪ್ರಾಧಿಕಾರ ಯಾವುದೇ ಆದೇಶ ನೀಡದಿದ್ದರೂ, ಸುಳ್ಳು ಮಾಹಿತಿ ನೀಡಿ ಭವನವನ್ನು ಖಾಸಗಿಯವರಿಗೆ ವಹಿಸಲು ಯತ್ನಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಹಿಂದೆ ಗಡಿ ಪ್ರಾಧಿಕಾರವು ಅಧಿಕಾರಿಗಳ ಸಮಿತಿ ರಚಿಸಲು ಸೂಚಿಸಿದ್ದರೂ, ಕಸಾಪ ಅಧ್ಯಕ್ಷರು ನೀಡಿದ ತಪ್ಪು ಮಾಹಿತಿಯಿಂದಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಉಂಟಾಗಿದೆ ಎಂದು ಸಂಘಟನೆಗಳು ದೂರಲಿವೆ. ಈಗಾಗಲೇ ಮಹಾನಗರ ಪಾಲಿಕೆ ಆಯುಕ್ತರು ನೀಡಿದ ನೋಟಿಸ್‌ಗಳಿಗೆ ಉತ್ತರಿಸದ ಮಂಗಲಾ ಮೆಟಗುಡ್ಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರಿ ಸ್ವತ್ತಾದ ಭವನವನ್ನು ಜಿಲ್ಲಾಡಳಿತವೇ ಭೌತಿಕವಾಗಿ ವಶಕ್ಕೆ ಪಡೆಯಬೇಕೆಂದು ಕನ್ನಡ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ. ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಮಹಾದೇವ ತಳವಾರ, ಬಲರಾಮ ಮಾಸೇನಟ್ಟ, ವಾಜೀದ ಹಿರೇಕೊಡಿ, ಶ್ರೀನಿವಾಸ ತಾಳೂಕರ, ಅಶೋಕ ಚಂದರಗಿ, ಮಲ್ಲಪ್ಪ ಗುಡಗೇನಟ್ಟಿ, ಶಿವರಡ್ಡಿ ಹುಚರಡ್ಡಿ ಈಶ್ವರಗೌಡ ಪಾಟೀಲ,ಬಾಳಪ್ಪ ಗುಡಗೇನಟ್ಟಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555