May 30, 2026
WhatsApp Image 2026-05-16 at 11.45.45 AM

ಬೆಳಗಾವಿ

ಬೆಳಗಾವಿಯಲ್ಲಿ ಜನರಿಗೆ 4,600 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಸೇರಿದ ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಸುಮಾರು 45,000 ಹೂಡಿಕೆದಾರರಲ್ಲಿ ಆತಂಕ ಸೃಷ್ಟಿ.

•  ಬೆಳಗಾವಿ:  ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ, ದೊಡ್ಡ ಕಾರ್ಯಕ್ರಮ, ಹೆಚ್ಚಿನ ಬಡ್ಡಿದರದ ಭರವಸೆ ಹಾಗೂ ವಿವಾದಾತ್ಮಕ ಭಾಷಣಗಳ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ಶಿವಂ ಅಸೋಸಿಯೇಟ್ ಸಂಸ್ಥೆ ಇದೀಗ ತನಿಖೆಯ ಕೇಂದ್ರಬಿಂದುವಾಗಿದೆ. ಬೆಳಗಾವಿಯಲ್ಲಿ 4,600ಕೋಟಿ ವಂಚನೆ ಆರೋಪ ಪ್ರಕರಣದಲ್ಲಿ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಸೇರಿದ ಕಚೇರಿಗಳ ಮೇಲೆ ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ ನೇತೃತ್ವದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

•  ಬೆಳಗಾವಿಯ ಶಿವಬಸವ ನಗರದಲ್ಲಿರುವ ಕಚೇರಿ ಸೇರಿದಂತೆ ಎರಡು ಕಡೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕಚೇರಿಗಳಲ್ಲಿದ್ದ ಹಣಕಾಸು ವ್ಯವಹಾರಗಳ ದಾಖಲೆಗಳು, ಹೂಡಿಕೆ ವಿವರಗಳು, ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣದ ಮಾಹಿತಿ ಹಾಗೂ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿರುವ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆ ಜಿಲ್ಲಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದರೆ, ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

•  ನಿನ್ನೆ ಮಧ್ಯರಾತ್ರಿ ಎರಡು ಗಂಟೆವರೆಗೂ ದಾಳಿ ನಡೆದಿತ್ತು. ಇಂದು ಮತ್ತೆ ದಾಳಿ ನಡೆಸಿ ಮೇ 15ರ ಸಂಜೆ ವೇಳೆಗೆ ಬೆಳಗಾವಿ ಎಸಿ ನೇತೃತ್ವದ ತಂಡ ತನಿಖೆ ಪೂರ್ಣಗೊಳಿಸಿದೆ. 45 ಸಾವಿರ ಜನರಿಂದ ಅಂದಾಜು 4600 ಕೋಟಿ ಹೂಡಿಕೆ ಆಗಿದ್ದು, RBI ನಿಯಮಗಳನ್ನ ಗಾಳಿಗೆ ತೂರಿ ಕೋಟ್ಯಾಂತರ ರುಪಾಯಿ ಹೂಡಿಕೆ ಮಾಡಿದ ಆರೋಪವಿದೆ.  ಡಿ.ಸಿ ಮೊಹಮ್ಮದ್ ರೋಷನ್ ಆದೇಶ ಮೇರೆಗೆ ಈ ದಾಳಿ ನಡೆದಿತ್ತು.ಕಂದಾಯ ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಖಲೆ ಪರಿಶೀಲನೆ ನಡೆಸಿದ್ದರು. ನಾಲ್ಕು ಬ್ಯಾಂಕ್ ಅಕೌಂಟ್  , ಎರಡು ಕಚೇರಿ, ಒಂದು ಅಪಾರ್ಟ್ಮೆಂಟ್ ನಿವಾಸ, ಮನೆಯಲ್ಲಿ ದಾಖಲೆ ಪರಿಶೀಲನೆ ಮಾಡಲಾಗಿದ್ದು. ಇದೀಗ 24 ಗಂಟೆಯಲ್ಲಿ ತನಿಖೆ ಪೂರ್ಣಗೊಳಿಸಿದ್ದು, ಬೆಳಗಾವಿ ಎ ಸಿ ಶ್ರವಣಕುಮಾರ ಇಂದೇ ಡಿಸಿಗೆ ವರದಿ ಸಲ್ಲಿಸಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

•  ಇತ್ತೀಚೆಗೆ ಶಿವಾನಂದ ನೀಲಣ್ಣನವರ್ ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ನಮ್ಮ ಬಳಿ 15 ಸಾವಿರ ಬಂದೂಕುಗಳಿವೆ, ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ, ನಾನು ಯಾರಿಗೂ ಹೆದರಲ್ಲ, ನಿಮ್ಮನ್ನು ಗಂಡಸರನ್ನಾಗಿ ಮಾಡಲು ಬಂದಿದ್ದೇನೆ ಎಂಬ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದವು. ಇದೇ ಭಾಷಣದಲ್ಲಿ 2028ರಲ್ಲಿ ಒಂದೇ ಸಲ 224 ಸ್ಥಾನ ಗೆದ್ದು ಮುಖ್ಯಮಂತ್ರಿ ಆಗುತ್ತೇನೆ ಎಂಬ ರಾಜಕೀಯ ಹೇಳಿಕೆಯೂ ವ್ಯಾಪಕ ಗಮನ ಸೆಳೆದಿತ್ತು. ಕಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಭಾಷಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹೇಳಿಕೆಗಳು ಕೇವಲ ಪ್ರಚಾರಕ್ಕಾಗಿ ಮಾಡಲ್ಪಟ್ಟವೆಯೇ ಅಥವಾ ಅದರ ಹಿಂದೆ ಬೇರೆ ಉದ್ದೇಶಗಳಿವೆಯೇ ಎಂಬ ಪ್ರಶ್ನೆಗಳೂ ಉದ್ಭವಿಸಿವೆ. ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಆಡಳಿತಾತ್ಮಕ ವಲಯದಲ್ಲೂ ಚರ್ಚೆ ಆರಂಭವಾಗಿತ್ತು.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555