May 30, 2026
IMG_20260502_211937

 

• ಬೆಳಗಾವಿ ವಕೀಲರ ಸಂಘಕ್ಕೆ ಭರ್ಜರಿ ಚುನಾವಣೆ.

• ಕಣದಲ್ಲಿ 33 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ.

• ಶಾಂತಿಯುತ ಮತದಾನ, ಬಿಗಿ ಪೊಲೀಸ್ ಬಂದೋಬಸ್ತ್.

• ಇಂದು ರಾತ್ರಿ 9ಕ್ಕೆ ಫಲಿತಾಂಶ ಪ್ರಕಟ.

 

ಕುಂದಾನಗರಿ ಬೆಳಗಾವಿಯ ಪ್ರತಿಷ್ಠಿತ ಬಾರ್ ಅಸೋಸಿಯೇಷನ್‌ನ 2026-28ನೇ ಸಾಲಿನ ಆಡಳಿತ ಮಂಡಳಿ ಆಯ್ಕೆಗೆ ಇಂದು ಹೈವೋಲ್ಟೇಜ್ ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ವಕೀಲರು ಉತ್ಸಾಹದಿಂದ ಮತದಾನ ಮಾಡುತ್ತಿದ್ದು, ಅಭ್ಯರ್ಥಿಗಳಲ್ಲಿ ಸಂಚಲನ ಮೂಡಿಸಿದೆ.

ಬಾರ್ ಅಸೋಸಿಯೇಷನ್‌ನ ಮುಂದಿನ ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇಂದು ಅತ್ಯಂತ ವ್ಯವಸ್ಥಿತವಾಗಿ ಜರುಗಿತು. ಒಟ್ಟು 1709 ಮತದಾರರನ್ನು ಹೊಂದಿರುವ ಈ ಸಂಘದ ಚುನಾವಣಾ ಕಣದಲ್ಲಿ ಈ ಬಾರಿ 33 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದಲೇ ಆರಂಭವಾದ ಮತದಾನ ಪ್ರಕ್ರಿಯೆಯು ಸಂಜೆಯವರೆಗೆ ಅತ್ಯಂತ ಶಾಂತಿಯುತವಾಗಿ ಸಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತದಾನ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ನ್ಯಾಯವಾದಿಗಳು ಶಿಸ್ತುಬದ್ಧವಾಗಿ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವುದು ಕಂಡುಬಂದಿತು

 

ಚುನಾವಣಾ ಪ್ರಕ್ರಿಯೆಯ ಉಸ್ತುವಾರಿಯನ್ನು ರಿಟರ್ನಿಂಗ್ ಆಫೀಸರ್ ಜೆ.ಡಿ. ತಿಗಡಿ ವಹಿಸಿಕೊಂಡಿದ್ದು, ಆರ್.ಎನ್. ಮಿಸಾಳೆ ಸೇರಿದಂತೆ ಸುಮಾರು 40 ಸಿಬ್ಬಂದಿಗಳು ಸುಗಮ ಮತದಾನಕ್ಕೆ ಶ್ರಮಿಸುತ್ತಿದ್ದಾರೆ. ಈಗಾಗಲೇ ಮೂವರು ಮಹಿಳಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಉಳಿದ ಪ್ರಮುಖ ಸ್ಥಾನಗಳಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಂಜೆ 6:30ರ ನಂತರ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ರಾತ್ರಿ 9 ಗಂಟೆಯ ಸುಮಾರಿಗೆ ಹೊಸ ಪದಾಧಿಕಾರಿಗಳ ಪಟ್ಟಿ ಅಧಿಕೃತವಾಗಿ ಹೊರಬೀಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಾರಿಯ ಫಲಿತಾಂಶವು ವಕೀಲರ ಸಂಘದ ಮುಂದಿನ ದಿಸೆಯನ್ನು ನಿರ್ಧರಿಸಲಿದ್ದು, ಎಲ್ಲರ ಕಣ್ಣು ರಾತ್ರಿಯ ಫಲಿತಾಂಶದ ಮೇಲಿದೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555