May 30, 2026
WhatsApp Image 2026-05-05 at 12.15.27 PM

• ಕಂಗ್ರಾಳಿ ಜಾತ್ರೆಯಲ್ಲಿ ಭರ್ಜರಿ ವ್ಯಾಪಾರ ವಹಿವಾಟು
• ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಯುವಕರ ಹೈಜೋಶ್
• ಮಹಿಳೆಯರು ಮತ್ತು ಮಕ್ಕಳಿಂದ ಅದ್ದೂರಿ ಖರೀದಿ
• ಏಳನೇ ದಿನಕ್ಕೆ ಕಾಲಿಟ್ಟ ಮಹಾಲಕ್ಷ್ಮೀ ಮಹೋತ್ಸವ

ಬೆಳಗಾವಿಯ ಬಿ.ಕೆ. ಕಂಗ್ರಾಳಿಯ ಮಹಾಲಕ್ಷ್ಮೀ ಜಾತ್ರೆ ಈಗ ಕೇವಲ ಭಕ್ತಿಯ ಕೇಂದ್ರವಾಗಿ ಉಳಿದಿಲ್ಲ, ಬದಲಾಗಿ ಅದೊಂದು ಬೃಹತ್ ಸಂಭ್ರಮದ ತಾಣವಾಗಿ ಮಾರ್ಪಟ್ಟಿದೆ. 43 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಬಂದ ಈ ಜಾತ್ರೆಯಲ್ಲಿ ಇಂದು ವ್ಯಾಪಾರ ಮತ್ತು ಮನರಂಜನೆಯದ್ದೇ ಅಬ್ಬರ. ಹಾಗಾದರೆ ಏಳನೇ ದಿನದ ಸಂಭ್ರಮ ಹೇಗಿದೆ? ನೋಡಿ ಈ ವಿಶೇಷ ವರದಿ.
ಬೆಳಗಾವಿಯ ಬಿ.ಕೆ. ಕಂಗ್ರಾಳಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವವು ಏಳನೇ ದಿನಕ್ಕೆ ಕಾಲಿಟ್ಟಿದ್ದು, ಜನಸಾಗರ ಈಗ ಮನರಂಜನೆಯ ಲೋಕದಲ್ಲಿ ಮುಳುಗಿದೆ. ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಬಂದ ಈ ಜಾತ್ರೆಯಲ್ಲಿ ಅದ್ದೂರಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣವಾಗಿದ್ದು, ಆಕಾಶವನ್ನೇ ಮುಟ್ಟುವಂತಿರುವ ಜೈಂಟ್ ವ್ಹೀಲ್‌ಗಳು ಪ್ರಮುಖ ಆಕರ್ಷಣೆಯಾಗಿವೆ. ವಿವಿಧ ಬಗೆಯ ಆಟಿಕೆಗಳು ಜಾತ್ರೆಯ ಅಂಗಳಕ್ಕೆ ಲಗ್ಗೆ ಇಟ್ಟಿದ್ದು, ಮಕ್ಕಳು ಮತ್ತು ಯುವಕರ ಕಲರವದಿಂದ ಇಡೀ ಪರಿಸರ ಜಗಮಗಿಸುತ್ತಿದೆ. ಸಾಹಸಮಯ ಆಟಗಳಲ್ಲಿ ಪಾಲ್ಗೊಳ್ಳುತ್ತಿರುವ ಯುವಪಡೆ ಜಾತ್ರೆಯ ಮಜಾವನ್ನು ಇಮ್ಮಡಿಗೊಳಿಸುತ್ತಿದೆ.

ಇನ್ನೊಂದೆಡೆ, ಜಾತ್ರೆಯ ಆವರಣವು ಗ್ರಾಹಕರಿಂದ ತುಂಬಿ ತುಳುಕುತ್ತಿದೆ. ನೂರಾರು ವೈವಿಧ್ಯಮಯ ವಸ್ತುಗಳ ಸ್ಟಾಲ್‌ಗಳು ಇಲ್ಲಿ ತಲೆ ಎತ್ತಿದ್ದು, ಗೃಹೋಪಯೋಗಿ ವಸ್ತುಗಳಿಂದ ಹಿಡಿದು ಫ್ಯಾಶನ್ ಸಾಮಗ್ರಿಗಳವರೆಗೆ ಎಲ್ಲವೂ ಲಭ್ಯವಿದೆ. ವಿಶೇಷವಾಗಿ ಮಹಿಳೆಯರು ತಮಗೆ ಬೇಕಾದ ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರೆ, ಮಕ್ಕಳು ಆಟಿಕೆಗಳ ಮೊರೆ ಹೋಗುತ್ತಿದ್ದಾರೆ. ವ್ಯಾಪಾರಸ್ಥರ ಮೊಗದಲ್ಲಿ ಮಂದಹಾಸ ಮೂಡಿದ್ದು, ನಿರೀಕ್ಷೆಗೂ ಮೀರಿದ ವಹಿವಾಟು ನಡೆಯುತ್ತಿರುವುದು ಈ ಬಾರಿಯ ಜಾತ್ರೆಯ ವಿಶೇಷತೆಯಾಗಿದೆ.
ಜಾತ್ರೆಯು ಕೇವಲ ಮನರಂಜನೆಗೆ ಸೀಮಿತವಾಗದೆ, ಭಕ್ತಿಯ ತಳಹದಿಯನ್ನೂ ಗಟ್ಟಿಯಾಗಿರಿಸಿಕೊಂಡಿದೆ. ಪ್ರತಿದಿನ ಗ್ರಾಮಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು, ಲಕ್ಷಾಂತರ ಜನರು ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ವಿವಿಧ ಧಾರ್ಮಿಕ ಕೈಂಕರ್ಯಗಳು ಸಾಂಗವಾಗಿ ನೆರವೇರುತ್ತಿದ್ದು, ಒಂದು ಕಡೆ ಭಕ್ತಿಯ ಪರಾಕಾಷ್ಠೆ ಹಾಗೂ ಇನ್ನೊಂದು ಕಡೆ ಸಂಭ್ರಮದ ವ್ಯಾಪಾರ-ಮನರಂಜನೆ ಎರಡೂ ಸೇರಿ ಬಿ.ಕೆ. ಕಂಗ್ರಾಳಿಯನ್ನು ದಕ್ಷಿಣ ಕಾಶಿಯಂತೆ ಕಂಗೊಳಿಸುವಂತೆ ಮಾಡಿದೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555