ಮುಖ್ಯ ಶಿಕ್ಷಕನ ಕರ್ತವ್ಯಲೋಪದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಿಂದ ಹೊರಗುಳಿದ ವಿದ್ಯಾರ್ಥಿ: ಮೊರಬದಲ್ಲಿ ಘಟನೆ ಬೆಳಕಿಗೆ ರಾಯಬಾಗ: ಶಾಲಾ ಆಡಳಿತದ ನಿರ್ಲಕ್ಷ್ಯದಿಂದ ವಿದ್ಯಾರ್ಥಿಯೊಬ್ಬ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡಿರುವ ಘಟನೆ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಜಿತ ಬಾನೆ ಅನುದಾನರಹಿತ ಪ್ರೌಢ ಶಾಲೆಯ ಅಜೀತ ಸರವ ವಿದ್ಯಾರ್ಥಿ ಕಳೆದ ಸಾಲಿನಲ್ಲಿ ಅನುತ್ತೀರ್ಣನಾಗಿದ್ದ ಹಿನ್ನೆಲೆಯಲ್ಲಿ ಈ ವರ್ಷ ಪುನರಾವರ್ತಿತ ಅಭ್ಯರ್ಥಿಯಾಗಿ ಪರೀಕ್ಷೆಗೆ ಹಾಜರಾಗಲು ಶುಲ್ಕವನ್ನು ಪಾವತಿಸಿದ್ದನು. ಆದರೆ ಮುಖ್ಯೋಪಾಧ್ಯಾಯ ಪ್ರತಾಪ ಬಗ್ಗೆ ಅವರ ಅಜಾಗರೂಕತೆಯಿಂದ ವಿದ್ಯಾರ್ಥಿಯ ಹೆಸರು ಪರೀಕ್ಷಾ ಪಟ್ಟಿಯಲ್ಲಿ ಸೇರದೆ , ಪ್ರವೇಶ ಪತ್ರ ಸಿಗದೆ ಪರೀಕ್ಷೆಯಿಂದ ವಂಚಿತರಾಗಿದ್ದಾನೆ ಎನ್ನಲಾಗಿದೆ. ಈ ಘಟನೆ ವಿದ್ಯಾರ್ಥಿ ಹಾಗೂ ಕುಟುಂಬದವರಲ್ಲಿ ಆತಂಕ ಮತ್ತು ಬೇಸರಕ್ಕೆ ಕಾರಣವಾಗಿದೆ. ವಿದ್ಯಾರ್ಥಿಯ ನೋವು: “ಈ ವರ್ಷ ಪರೀಕ್ಷೆಗೆ ತುಂಬಾ ಸಿದ್ಧತೆ ಮಾಡಿಕೊಂಡಿದ್ದೆ. ಶುಲ್ಕವೂ ಪಾವತಿಸಿದ್ದೇನೆ. ಆದರೆ ಶಾಲೆಯ ತಪ್ಪಿನಿಂದ ಪರೀಕ್ಷೆಗೆ ಅವಕಾಶ ಸಿಗಲಿಲ್ಲ. ನನ್ನ ಭವಿಷ್ಯಕ್ಕೆ ಇದರಿಂದ ಹಾನಿಯಾಗಿದೆ. ಸಂಬಂಧಪಟ್ಟವರು ನನ್ನ ಸಮಸ್ಯೆಗೆ ಪರಿಹಾರ ಕೊಡಬೇಕು” ಎಂದು ವಿದ್ಯಾರ್ಥಿ ಮನವಿ ಮಾಡಿಕೊಂಡಿದ್ದಾನೆ. ಈ ಕುರಿತು ಪೋಷಕರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.