May 30, 2026
WhatsApp Image 2026-04-11 at 5.11.58 PM

 ಬೆಳಗಾವಿ

• ಕಸಾಯಿ ಗಲ್ಲಿಯಲ್ಲಿ ಹದಗೆಟ್ಟ ಮೂಲಭೂತ ಸೌಕರ್ಯ
• ಅಧಿಕಾರಿಗಳ ಭರವಸೆ ಬರೀ ಹುಸಿ ಆಶ್ವಾಸನೆ
• ಗಬ್ಬು ನಾರುವ ಚರಂಡಿ, ಕಿತ್ತ ಹೋದ ರಸ್ತೆ
• ಭೀಮ ಜ್ಯೋತಿ ಸಂಚಾರಕ್ಕೆ ಇಲ್ಲದಾಯಿತೇ ಪೂರ್ವ ಸಿದ್ಧತೆ

 

♦ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಗೆ ಕ್ಷಣಗಣನೆ ಆರಂಭವಾಗಿದೆ. ಬೆಳಗಾವಿಯಲ್ಲಿ ಭವ್ಯ ಆಚರಣೆಗೆ ಸಿದ್ಧತೆ ನಡೆಯುತ್ತಿದ್ದರೂ, ನಗರದ ಕಸಾಯಿ ಗಲ್ಲಿಯ ದುಸ್ಥಿತಿ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಭರವಸೆ ನೀಡಿದ್ದ ಪಾಲಿಕೆ, ಈಗ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತ ರತ್ನ ಡಾ. ಅಂಬೇಡ್ಕರ್ ಜಯಂತಿ ಹಿನ್ನೆಲೆ ಬೆಳಗಾವಿಯ ಕಸಾಯಿ ಗಲ್ಲಿಯ ಮಾರ್ಗದಲ್ಲಿ ಭೀಮ ಜ್ಯೋತಿ ಸಂಚರಿಸಲಿದ್ದು, ಅದಕ್ಕೂ ಮೊದಲೇ ಕಸಾಯಿ ಗಲ್ಲಿಯ ಸ್ವಚ್ಛತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರ ಸಭೆಯಲ್ಲಿ ಮನವಿ ಮಾಡಲಾಗಿತ್ತು. ಏಪ್ರಿಲ್ 13ರೊಳಗೆ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಜಯಂತಿಗೆ ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಇದ್ದರೂ, ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿನ ಚರಂಡಿಗಳಿಗೆ ಕಾಂಕ್ರೀಟ್ ಇಲ್ಲದ ಕಾರಣ ಕೊಳಚೆ ನೀರು ಸರಾಗವಾಗಿ ಹರಿಯದೆ ಒಂದೆಡೆ ನಿಂತು ಪರಿಸರವನ್ನೆಲ್ಲ ಗಬ್ಬು ನಾರುವಂತೆ ಮಾಡಿದೆ. ರಸ್ತೆಯ ಡಾಂಬರು ಕಿತ್ತು ಹೋಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ಇಷ್ಟೇ ಅಲ್ಲದೆ, ರಸ್ತೆಯ ಮಧ್ಯಭಾಗದಲ್ಲೇ ಕಸದ ರಾಶಿ ಬಿದ್ದಿದ್ದರೂ ಸ್ವಚ್ಛತಾ ಸಿಬ್ಬಂದಿ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ನೈರ್ಮಲ್ಯದ ಕೊರತೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ ಎಂದು ಬಾಬು ಫುಜಾರಿ ಕಳವಳ ವ್ಯಕ್ತಪಡಿಸಿದರು. ಬೈಟ್  ಅತ್ಯಂತ ವೈಭವದಿಂದ ಜರುಗಲಿರುವ ಭೀಮ ಜ್ಯೋತಿ ಮೆರವಣಿಗೆ ಈ ರಸ್ತೆಯ ಮೂಲಕವೇ ಹಾದುಹೋಗಬೇಕಿದೆ. ಆದರೆ, ಗುಂಡಿಬಿದ್ದ ರಸ್ತೆ ಮತ್ತು ಕೊಳಚೆ ನೀರು ಭಕ್ತರ ಹಾಗೂ ಮೆರವಣಿಗೆಯ ಹಾದಿಗೆ ಕಂಟಕವಾಗುವ ಸಾಧ್ಯತೆಯಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಸ್ವಚ್ಛತೆ ಕೈಗೊಳ್ಳಬೇಕು, ಇಲ್ಲದಿದ್ದರೆ ಜಯಂತಿಯ ದಿನದಂದು ಗಬ್ಬು ನಾರುವ ಪರಿಸರದಲ್ಲೇ ಮೆರವಣಿಗೆ ಸಾಗುವ ಅನಿವಾರ್ಯತೆ ಎದುರಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555