May 30, 2026
IMG_20260408_155403

1. ಬರಿದಾಗುತ್ತಿದೆ ಉತ್ತರ ಕರ್ನಾಟಕದ ಜೀವನಾಡಿ ಒಡಲು

2. ಬೇಸಿಗೆ ಆರಂಭದಲ್ಲೇ ಘಟಪ್ರಭಾ ನದಿ ಖಾಲಿ ಖಾಲಿ

3. ಕಳೆದ ವರ್ಷಕ್ಕಿಂತ ನೀರಿನ ಮಟ್ಟ ಕುಸಿತ

4. ಸಾವಿರಾರು ಹಳ್ಳಿಗಳಿಗೆ ಎದುರಾದ ಕುಡಿಯುವ ನೀರಿನ ಸಮಸ್ಯೆ

ಉತ್ತರ ಕರ್ನಾಟಕದ ರೈತರ ಮತ್ತು ಸಾರ್ವಜನಿಕರ ಜೀವನಾಡಿ ಘಟಪ್ರಭಾ ನದಿ ಈಗ ಬರಿದಾಗುತ್ತಿದೆ. ಮಹಾರಾಷ್ಟ್ರದಲ್ಲಿ ಹುಟ್ಟಿ ಕರುನಾಡಿನಾದ್ಯಂತ ಹರಿಯುವ ಈ ನದಿ, ಬೇಸಿಗೆಯ ಆರಂಭದಲ್ಲೇ ಬತ್ತಿ ಹೋಗುತ್ತಿರುವುದು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಜನರಲ್ಲಿ ಆತಂಕ ಮೂಡಿಸಿದೆ. ಹಿಡಕಲ್ ಜಲಾಶಯದ ನೀರಿನ ಮಟ್ಟದಲ್ಲೂ ಗಣನೀಯ ಇಳಿಕೆಯಾಗಿದ್ದು, ಮುಂದಿನ ದಿನಗಳು ಕಷ್ಟಕರವಾಗುವ ಮುನ್ಸೂಚನೆ ಸಿಗುತ್ತಿದೆ.

ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಸಹಸ್ರಾರು ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಆಧಾರವಾಗಿರುವ ಘಟಪ್ರಭಾ ನದಿ ಈಗ ಅಕ್ಷರಶಃ ಸೊರಗುತ್ತಿದೆ. ಸುಮಾರು 283 ಕಿಲೋಮೀಟರ್ ದೂರ ಹರಿದು ಕೃಷ್ಣಾ ನದಿಯನ್ನು ಸೇರುವ ಈ ನದಿಯ ಒಡಲು ಬೇಸಿಗೆಯ ಆರಂಭಿಕ ಹಂತದಲ್ಲೇ ಖಾಲಿಯಾಗುತ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಉಗಮಿಸಿ ಈ ಭಾಗದ ಸಮೃದ್ಧಿಗೆ ಕಾರಣವಾಗಿದ್ದ ನದಿ ಬತ್ತುತ್ತಿರುವುದು ಸಾವಿರಾರು ರೈತ ಕುಟುಂಬಗಳ ನಿದ್ದೆಗೆಡಿಸಿದೆ.

ನೀರಿನ ಲಭ್ಯತೆಯ ಅಂಕಿ-ಅಂಶಗಳನ್ನು ಗಮನಿಸಿದರೆ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ. 51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ ಕಳೆದ ವರ್ಷ ಏಪ್ರಿಲ್‌ನಲ್ಲಿ 19.538 ಟಿಎಂಸಿ ನೀರು ಸಂಗ್ರಹವಿತ್ತು, ಆದರೆ ಈ ವರ್ಷ ಅದು ಕೇವಲ 17.591 ಟಿಎಂಸಿಗೆ ಕುಸಿದಿದೆ. ಇದರಲ್ಲಿ 2 ಟಿಎಂಸಿಯಷ್ಟು ನೀರು ‘ಡೆಡ್ ಸ್ಟೋರೇಜ್’ ಆಗಿರುವುದರಿಂದ, ಜಿಲ್ಲೆಯ ಪ್ರಮುಖ ಜಲಮೂಲಗಳು ಬರಿದಾಗುತ್ತಿರುವುದು ದನಕರುಗಳಿಗೆ ಹಾಗೂ ಜನರ ದೈನಂದಿನ ಬಳಕೆಗೆ ತೀವ್ರ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555