ರಾಯಬಾಗ:ತಾಲ್ಲೂಕಿನ “ಬ್ಯಾಕುಡ”
ಆನಂದ ಮನ್ನಿಕೇರಿ
ಬ್ಯಾಕುಡ ಪ್ರಾಥಮಿಕ ಆರೋಗ್ಯ ಕೇಂದ್ರ ಈಗ ರಾಜ್ಯಕ್ಕೆ ಮಾದರಿ:
ವಸಂತರಾವ್ ಪಾಟೀಲರ ದೂರ ದೃಷ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಈಗ ರಾಜ್ಯದ ಗಮನ ಸೆಳೆದಿದೆ
ರಾಯಬಾಗ:ತಾಲ್ಲೂಕಿನ “ಬ್ಯಾಕುಡ” ಗ್ರಾಮ ಎಂದಾಕ್ಷಣ ಜನಮನದಲ್ಲಿ ಮೂಡುವವರು ದಿ. ವಿ ಎಲ್ ಪಾಟೀಲ (ಅಭಾಜೀ) ಯವರು ಆರು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಚುನಾಯಿತರಾಗಿದ್ದರು. ಪರಿಶಿಷ್ಟ ಜಾತಿ, ಪಂಗಡದವರ ಮೇಲೆ ಅವರಿಗೆ ವಿಶೇಷ ಪ್ರೀತಿ ಇತ್ತು. ಆ ವರ್ಗಗಳಿಗೆ ಸೇರಿದ ಮಕ್ಕಳಿಗೆ ತಮ್ಮ ಶಾಲೆಗಳಲ್ಲಿ ಉಚಿತ ಊಟ-ವಸತಿ-ಶಿಕ್ಷಣ ನೀಡುತ್ತಿದ್ದರು. ಅದಕ್ಕಿಂತಲೂ ಮುಖ್ಯವಾಗಿ, 1952ರ ಲೋಕಸಭಾ ಚುನಾವಣೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸೋತಿದ್ದಾಗ, ಪಾಟೀಲರು ಮುಂಬೈ ವಿಧಾನಸಭೆಯ ಪಕ್ಷೇತರರ ಸದಸ್ಯರನ್ನು ಸೇರಿಸಿಕೊಂಡು ಅಂಬೇಡ್ಕರ್ ಅವರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಹೀಗಾಗಿ ಜನ ಅವರನ್ನು ಪ್ರೀತಿಯಿಂದ ಅಣ್ಣಾ, ಅಭಾ, ಬ್ಯಾಕುಡ್ ಹುಲಿ ಎಂದೇ ಕರೆಯುತ್ತಿದ್ದರು.
ಇಂತಹಾ ಜನಸೇವೆಗಳಿಂದ ಗುರುತಿಸಿಕೊಂಡಿದ್ದ ವಿ ಎಲ್ ಪಾಟೀಲರು ತಮ್ಮ ದೂರದೃಷ್ಟಿ ಇಟ್ಟುಕೊಂಡು ತಮ್ಮೂರಿನ ಆಸುಪಾಸಿನ ಜನರ ಆರೋಗ್ಯಕ್ಕಾಗಿ ಬ್ಯಾಕುಡ್ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡಿದ್ದರು. ಅಂತಹ ಪ್ರಾಥಮಿಕ ಆರೋಗ್ಯ ಕೇಂದ್ರವು ಸೇವಾ ಗುಣಮಟ್ಟ, ಮೂಲಸೌಕರ್ಯ ಮತ್ತು ಶಿಸ್ತಿನ ಕೆಲಸದಿಂದಾಗಿ ರಾಜ್ಯದ ಮಟ್ಟದಲ್ಲಿ ಮಾದರಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಮಾಜಿ ಕಂದಾಯ ಸಚಿವ ವಸಂತರಾವ್ ಪಾಟೀಲ ಅವರು ಗ್ರಾಮೀಣ ಪ್ರದೇಶಕ್ಕೂ ಉತ್ತಮ ಆರೋಗ್ಯ ಸೇವೆ ತಲುಪಿಸಬೇಕು ಎಂಬ ಉದ್ದೇಶದಿಂದ ಕಟ್ಟಿಸಿದ ಈ ಕೇಂದ್ರ ಇಂದು ಜನರ ನಂಬಿಕೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ.
ಈ ಆಸ್ಪತ್ರೆಗೆ ಪ್ರತಿ ತಿಂಗಳು ಸುಮಾರು 15 ರಿಂದ 20 ಮಹಿಳೆಯರು ಹೆರಿಗೆಗೆ ಒಳಗಾಗುತ್ತಾರೆ. ತಾಯಿ–ಮಗು ಆರೋಗ್ಯ ಕಾಳಜಿಯಲ್ಲಿ ಈ ಕೇಂದ್ರ ಅತ್ಯಂತ ವಿಶ್ವಾಸಾರ್ಹವಾಗಿದ್ದು, ವೈದ್ಯಕೀಯ ಸಿಬ್ಬಂದಿಯ ಶ್ರದ್ಧೆ ಹಾಗೂ ಸಮಯಪಾಲನೆ ಜನರ ಮೆಚ್ಚುಗೆಗೆ ಕಾರಣವಾಗಿದೆ.
ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರು, ಒಳರೋಗಿ ಹಾಗೂ ಹೊರರೋಗಿ ವಿಭಾಗ, ಮಕ್ಕಳ ಲಸೀಕಾಕರಣ, ಪ್ರಯೋಗಾಲಯ ಸೇರಿದಂತೆ ಅಗತ್ಯ ಸೇವೆಗಳು ಸುಸಜ್ಜಿತವಾಗಿ ಲಭ್ಯವಿವೆ. ಸುತ್ತಮುತ್ತಲಿನ ಗ್ರಾಮಗಳ ಆರೋಗ್ಯ ಸೇವೆಗೆ ಜೀವನಾಡಿಯಾಗಿರುವ ಈ ಕೇಂದ್ರವು 11 ಉಪಕೇಂದ್ರಗಳನ್ನು ಒಳಗೊಂಡಿದ್ದು, 20ಕ್ಕಿಂತ ಅಧಿಕ ಹಳ್ಳಿಗಳಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತದೆ.
ನಮ್ಮಜ್ಜನವರಾದ ದಿವಂಗತ ವಿ. ಎಲ್. ಪಾಟೀಲರು (ಅಭಾಜಿ) ಈ ಭಾಗದ ಬಡಜನರ ಆರೋಗ್ಯದ ಹಿತದೃಷ್ಟಿಯಿಂದ ಬ್ಯಾಕುಡ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದ್ದರು. ಅವರ ದೂರದೃಷ್ಟಿಯ ಫಲವಾಗಿ ಆರಂಭವಾದ ಈ ಆರೋಗ್ಯ ಕೇಂದ್ರವು ಇಂದು ಹೆಮ್ಮರವಾಗಿ ಬೆಳೆದು ರಾಜ್ಯಮಟ್ಟದಲ್ಲಿ ತನ್ನದೇ ಆದ ಹೆಸರು ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆ ತರುವ ಸಂಗತಿಯಾಗಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿಗಳ ಸಮರ್ಪಿತ ಸೇವೆಯಿಂದಲೇ ಈ ಸಾಧನೆ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಶಿವರಾಜ್ ಪಾಟೀಲ ಎ ಎ ಪಾಟೀಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಬ್ಯಾಕುಡ.
ಬ್ಯಾಕುಡ್ ಆಸ್ಪತ್ರೆಯ ಸತತ ಪ್ರಗತಿಯ ಹಿನ್ನೆಲೆಯಲ್ಲಿ ಇದನ್ನು ಮುಂದಿನ ಹಂತಕ್ಕೆ ಏರಿಸುವ ಅಗತ್ಯವಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಿದ್ದಾರೆ. ವಿಶೇಷವಾಗಿ ಗ್ರಾಮದ ಸದಾಶಿವ ಕಾಂಬಳೆಯವರು ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಾಧನೆಗೆ ಮತ್ತೊಂದು ಮಾನ್ಯತೆ ಸಿಕ್ಕಿದ್ದು ಇತ್ತೀಚೆಗೆ. ನ್ಯೂಸ್ 18 ಕನ್ನಡ ಚಾನೆಲ್ ರಾಜ್ಯದ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರವೆಂದು ಘೋಷಿಸಿ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದೆ.
ಅಭಾಜೀಯವರು ಬಿತ್ತಿದ ಸೇವಾ ದೃಷ್ಟಿಯೇ ಇಂದು ಫಲವಾಗಿ ಅರಳಿದ್ದು, ಬ್ಯಾಕುಡ ಆರೋಗ್ಯ ಕೇಂದ್ರವು ಗ್ರಾಮೀಣ ವೈದ್ಯಕೀಯ ಸೇವೆಗೆ ದಿಕ್ಕು ತೋರುವ ಜೀವಂತ ಮಾದರಿಯಾಗಿದೆ.
ಡಾ. ಸೊಹೈಲ್ ಖಾನ್ ನದಾಫ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಬ್ಯಾಕೂಡ.
