ಉತ್ತಮ ಸೇವೆಯಿಂದ ಗೌರವಕ್ಕೆ ಪಾತ್ರರಾದ ಜನ ಮೆಚ್ಚಿದ ವೈದ್ಯ ಜಿ.ಕೆ. ಕಾಳೆ
ವೈದ್ಯಕೀಯ ಸೌಲಭ್ಯಗಳಿಲ್ಲದ ಕಾಲದಿಂದ ಆಧುನಿಕ ಕಾಲದಲ್ಲೂ ನರೇಗಲ್ಲನಲ್ಲಿ ಸೇವೆ
ನರೇಗಲ್ಲ : ಸಮಾಜದಲ್ಲಿ ವೈದ್ಯರನ್ನು ಪೂಜ್ಯ ಭಾವದಿಂದ ಕಾಣಲಾಗುತ್ತದೆ. ಹಲವರ ಪಾಲಿಗೆ ಅವರು ದೈವ ಸ್ವರೂಪಿ ಕೂಡ. ಮಾರಣಾಂತಿಕ ಕಾಯಿಲೆ ಗುಣಪಡಿಸಿ ಅನೇಕರಿಗೆ ಮರು ಜನ್ಮ ನೀಡುವವರೂ ಇವರೇ. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ‘ವೈದ್ಯೋ ನಾರಾಯಣ ಹರಿಃ’ ಎಂಬ ಉಲ್ಲೇಖವಿದೆ. ಹೀಗೆ ಮಾನವೀಯ ಮೌಲ್ಯಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ವೈದ್ಯ ವೃತ್ತಿಯ ಘನತೆಯನ್ನು ಹೆಚ್ಚಿಸಿದ ನರೇಗಲ್ಲ ಪಟ್ಟಣದ ಹಿರಿಯ ವೈದ್ಯ ಡಾ. ಗಜಾನನ ಕೃಷ್ಣರಾವ್ ಕಾಳೆ ಅವರು ಗದಗ ಜಿಲ್ಲೆ ಕಂಡ ಅಪ್ರತಿಮ ಹಾಗೂ ಅಂತಃಕರಣವಿದ್ದಂತಹ ವೈದ್ಯರಾಗಿದ್ದಾರೆ. ರೋಗಿಗಳೊಂದಿಗೆ ಮಾನವೀಯ ಸಂಬಂಧ ಬೆಳೆಸಿಕೊಂಡು, ಕಷ್ಟವೆಂದು ಆಸ್ಪತ್ರೆಗೆ ಬಂದಾಗ ಆಪ್ತ ಸಮಾಲೋಚನೆ (counseling) ಮೂಲಕ ಧೈರ್ಯ ತುಂಬಿ, ರೋಗಿಗಳ ಪರಿಸ್ಥಿತಿಯನ್ನು ಅರಿತು ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾ ಬಂದಿರುತ್ತಾರೆ. ತಮ್ಮ ನಿಸ್ವಾರ್ಥ ಸೇವೆ, ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದಾಗಿ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. ಜನ ಸೇವೆ ಮಾಡುವ ವೈದ್ಯರು ಅಂದರೆ ಕೇವಲ ಚಿಕಿತ್ಸೆ ನೀಡುವುದಲ್ಲದೆ, ತಾಳ್ಮೆ, ಪ್ರೀತಿ ಮತ್ತು ವೃತ್ತಿ ಬದ್ಧತೆಯಿಂದ ರೋಗಿಗಳನ್ನು ಆರೈಕೆ ಮಾಡುವವರಾಗಿದ್ದಾರೆ. ವೈದ್ಯಕೀಯ ಸವಲತ್ತುಗಳು ಸಿಗದ ಗ್ರಾಮೀಣ ಭಾಗದಲ್ಲಿದ್ದುಕೊಂಡು ನಾಲ್ಕುವರೆ ದಶಕಗಳಿಂದ ಜನರಿಗೆ ಹಗಲು-ರಾತ್ರಿ ಎನ್ನದೆ ಸೇವೆ ಒದಗಿಸಿದ ಚೈತನ್ಯರಾಗಿದ್ದಾರೆ ಹಾಗೂ ಕಲ್ಯಾಣ ಕರ್ನಾಟಕದ ಗಡಿ ಭಾಗದ ಹಳ್ಳಿಗಳ ಮತ್ತು ಗದಗ ಜಿಲ್ಲೆಯ ಗ್ರಾಮೀಣರ ನೆಚ್ಚಿನ ವೈದ್ಯರಾಗಿದ್ದಾರೆ.
ಡಾ. ಜಿ.ಕೆ. ಕಾಳೆಯವರು 1950ರ ಫೆಬ್ರುವರಿ 22ರಂದು ನರೇಗಲ್ಲನಲ್ಲಿ ಜನಿಸಿದರು. ಇವರ ತಾಯಿ ರಾಧಾಬಾಯಿಯವರು ಬೆಳಗಾವಿಯ ಓರ್ವ ವೈದ್ಯರ ಮಗಳಾಗಿದ್ದರು ಹಾಗೂ ತಂದೆ ಡಾ. ಕೃಷ್ಣರಾವ್ ಕಾಳೆಯವರು ಮುಂಬೈಯಲ್ಲಿ ಎಲ್‌ಸಿಪಿಎಸ್ (LCPS) ವೈದ್ಯಕೀಯ ಶಿಕ್ಷಣ ಮುಗಿಸಿ ನರೇಗಲ್ಲನಲ್ಲಿ ವೈದ್ಯಕೀಯ ಸೇವೆ ಮಾಡುತ್ತಿದ್ದರು. ಜನ್ಮದಾತರಿಂದ ಹಾಗೂ ವಿದ್ಯೆ ಕಲಿಸಿದ ಗುರುಗಳಿಂದ ಪ್ರೇರಣೆ ಪಡೆದು ವೈದ್ಯನಾಗುವ ದೃಢಸಂಕಲ್ಪವನ್ನು ಮಾಡಿದರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ನರೇಗಲ್‌ನಲ್ಲಿ, ಪಿಯು ಶಿಕ್ಷಣವನ್ನು ಗದಗ ನಗರದ ಜೆಟಿ ಕಾಲೇಜಿನಲ್ಲಿ, ಬಿಎಸ್‌ಸಿ ಪದವಿಯನ್ನು ಬೆಳಗಾವಿಯ ಆರ್‌ಎಲ್‌ಎಸ್ ಕಾಲೇಜಿನಲ್ಲಿ ಹಾಗೂ ಗುಲ್ಬರ್ಗಾದ ಮಹಾದೇವಪ್ಪ ರಾಂಪುರ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ವೈದ್ಯಕೀಯ ಪದವಿಯನ್ನು ಪಡೆದರು. ವಿಜಯಪುರದ ಡಾ. ಮಂಗಳಾ ಅವರೊಂದಿಗೆ 1978ರ ಡಿಸೆಂಬರ್ 08ರಂದು ಮದುವೆಯಾದರು. ಡಾ. ದೀಪಾಲಿ, ಡಾ.ಕೃಷ್ಣ, ಕಿರಣ ಎಂಬ ಮೂವರು ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿದೆ.
1978ರ ಆಗಸ್ಟ್ ತಿಂಗಳಲ್ಲಿ ಡಾ.ಮಂಗಳಾ ಅವರ ಕೋರಿಕೆ ಮೇರೆಗೆ ನರೇಗಲ್ಲನಲ್ಲಿ ಆಸ್ಪತ್ರೆಯನ್ನು ಆರಂಭ ಮಾಡಿದರು. ಹುಬ್ಬಳ್ಳಿಗೆ ಸರ್ಕಾರಿ ಬಸ್‌ನಲ್ಲಿ ಹೋಗಿ ಔಷಧಿ ತಂದು ಚಿಕಿತ್ಸೆ ಕೊಡಲು ಆರಂಭಿಸಿದರು. ಆಗಿನ ಕಾಲದಲ್ಲಿ ಹೆಚ್ಚಿನ ಚಿಕಿತ್ಸೆಗೆ ಗದಗ-ಹುಬ್ಬಳ್ಳಿಗೆ ಹೋಗುತ್ತಿದ್ದ ಜನರು ನರೇಗಲ್‌ನಲ್ಲಿಯೇ ಉತ್ತಮ ಚಿಕಿತ್ಸೆ ಪಡೆಯಲು ಮುಂದಾದರು. 2011ರ ಡಿಸೆಂಬರ್‌ನಲ್ಲಿ ಸುಸಜ್ಜಿತ ಆಸ್ಪತ್ರೆ ಆರಂಭಗೊಂಡು ಈ ಭಾಗದ ಜನರಿಗೆ ಆಧುನಿಕ ಸೌಲಭ್ಯಗಳೊಂದಿಗೆ ಸೇವೆ ಸಲ್ಲಿಸುತ್ತಿದೆ.
1985ರಲ್ಲಿ ಕಳಕೊಣ್ಣನ್ನವರ ಅವರ ನಿಧನದಿಂದ ತೆರವಾದ ಉಪಚುನಾವಣೆಗೆ ಆಕಸ್ಮಿಕವಾಗಿ ಭಾಗವಹಿಸಿ ಗೆದ್ದು ರಾಜಕೀಯ ಪ್ರವೇಶ ಮಾಡಿದರು. ಸರಳ ಸಜ್ಜನಿಕೆಯ ಶಾಸಕರಾಗಿದ್ದ ದಿವಂಗತ ಜ್ಞಾನದೇವ ದೊಡ್ಡಮೇಟಿಯವರೊಂದಿಗೆ ನಿಕಟ ಸಂಪರ್ಕ ಹಾಗೂ ಒಳ್ಳೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯ ಪ್ರವೃತ್ತರಾಗಿ ʼಅದ್ವಾನ್ʼ ಹಿಡಿದ ಪುರಸಭೆಯಲ್ಲಿ ಕೆಲ ಬದಲಾವಣೆ ತಂದು ಸರ್ಕಾರದ ಸಹಾಯದಿಂದ ಅಭಿವೃದ್ದಿ ಕಾರ್ಯಗಳನ್ನು ಮಾಡಿದರು. 2.26 ಎಕರೆ ಜಾಗ ಖರೀದಿಸಿ ಸುಮಾರು ಐವತ್ತು ಪ್ಲಾಟುಗಳನ್ನು ನಿರ್ಮಿಸಿ ಬಡವರಿಗೆ ಹಂಚಿಕೆ ಮಾಡಿಸಿದರು ಈಗ ಅದನ್ನು ʼಭಾಗ್ಯʼ ನಗರವೆಂದು ಕರೆಯುತ್ತಾರೆ. ಸರ್ಕಾರಿ ಶಾಲೆಗೆ 7 ಕೊಠಡಿಗಳನ್ನು ಮಂಜೂರ ಮಾಡಿಸಿ ನಿರ್ಮಿಸಿದರು. ಹೀಗೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಈಚೆಗೆ ಹಣಬಲ, ಜಾತಿಬಲ ಚುನಾವಣೆಯಲ್ಲಿ ಸೇರಿದ ಕಾರಣದಿಂದಾಗಿ ಸಕ್ರೀಯ ರಾಜಕಾರಣದಿಂದ ದೂರ ಉಳಿದಿರುತ್ತಾರೆ. ಆದರೆ ಎಲ್ಲರೊಂದಿಗೆ ಪ್ರೀತಿ, ಗೌರವ, ಸ್ನೇಹತ್ವ ಉಳಿಸಿಕೊಂಡಿದ್ದಾರೆ. ಶ್ರೀ ಕಲ್ಮೇಶ್ವರ ದೇವಸ್ಥಾನ, ಶ್ರೀ ದತ್ತಾತ್ರೆಯ ದೇವಸ್ಥಾನದ ಅಭಿವೃದ್ದಿಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದ್ದಾರೆ. ಲೋಕ ಕಲ್ಯಾಣಾರ್ಥಕ್ಕಾಗಿ ನರೇಗಲ್‌ನಲ್ಲಿ ನಡೆದ ಐತಿಹಾಸಿಕ ಸಹಸ್ರ ಚಂಡಿ ಯಾಗದ ನೇತೃತ್ವ ವಹಿಸಿ ಸರ್ವಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ.
ಡಾ. ಜಿ. ಕೆ. ಕಾಳೆಯವರ 75ನೇ ವರ್ಷದ ಜನ್ಮ ದಿನದ ಅಮೃತ ಮಹೋತ್ಸವದ ಸವಿನೆನಪಿಗಾಗಿ, ಅವರ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಕೃಷಿಕ ಸಾಧನೆಗಳು ಮುಂದಿನ ಪೀಳಿಗೆಗೆ ಪರಿಚಯವಾಗಲಿ ಎನ್ನುವ ಉದ್ದೇಶದೊಂದಿಗೆ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಹಿತೈಶಿಗಳು ಲೇಖನಗಳ ಸರಮಾಲೆ ʼಸಮರ್ಪಿತʼ ಎನ್ನುವ ಅಭಿನಂದನಾ ಗ್ರಂಥವನ್ನು ಸಮರ್ಪಣೆ ಮಾಡುತ್ತಿದ್ದಾರೆ. 2026ರ ಫೆಬ್ರವರಿ 22 ರಂದು ಕೋಡಿಕೊಪ್ಪದ ವೀರಪ್ಪಜ್ಜನ ಮಠದಲ್ಲಿ ಕಾರ್ಯಕ್ರಮ ನಡೆಯಲಿದೆ.
ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಶೈಕ್ಷಣಿಕ ಸೇವೆ ವೈದ್ಯಕೀಯ ವೃತ್ತಿಗೆ ಮೊದಲ ಆದ್ಯತೆ ನೀಡುವ ವೈದ್ಯ ಡಾ. ಜಿ. ಕೆ. ಕಾಳೆಯವರು ತಮ್ಮ ಬಿಡುವಿನ ವೇಳೆಯನ್ನು ಶಾಲಾ ಮಕ್ಕಳೊಂದಿಗೆ ಕಳೆಯುತ್ತಾರೆ. ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಲಿಂಗೈಕ್ಯ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳ ಸಂಪರ್ಕಕ್ಕೆ ಬಂದ ನಂತರ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿ ಶೈಕ್ಷಣಿಕ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತವಾಗಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. 1989ರಲ್ಲಿ ಆರಂಭವಾದ ಬಸವೇಶ್ವರ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗೆ ಆರಂಭಿಕ ಚೇರಮನ್ನರಾಗಿ ನೇಮಕವಾದ ಇವರು ಇವತ್ತಿಗೂ ಮುಂದುವರೆದಿದ್ದಾರೆ. 135 ವಿದ್ಯಾರ್ಥಿಗಳಿಂದ ಹಾಗೂ ಒಂದು ಎತ್ತಿನ ಗಾಡಿಯಿಂದ ಪ್ರಾರಂಭವಾದ ಶಾಲೆ ಇಂದು ಶಿಕ್ಷಕರ ಸಹಕಾರದಲ್ಲಿ ಶಾಲೆಯ ಮಕ್ಕಳ ಸಂಖ್ಯೆ 800 ಗಡಿ ದಾಟಿದೆ.
ಮೂಲ ಸೌಲಭ್ಯಗಳ ಲಭ್ಯತೆ ಇಲ್ಲದ ಕಾಲದಿಂದ ಇಂದಿನ ವರೆಗೂ ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸಿರುವುದು ಸಂತೋಷ ನೀಡಿದೆ. ಜನರು ತೋರಿಸುವ ಪ್ರೀತಿ ಗೌರವಕ್ಕೆ ಚಿರಋಣಿಯಾಗಿರುವೆ. ಜೀವನದ ಕೊನೆವರೆಗೂ ವೈದ್ಯಕೀಯ ಸೇವೆಯನ್ನು ಸಮರ್ಪಿಸುವೆ. ನಾನೊಬ್ಬ ನೇರ ನುಡಿಗಳ ಮನುಷ್ಯ ಯಾರಿಗಾದರೂ ನೋಯಿಸಿದ್ದರೆ ಮನ್ನಿಸಿ-ಕ್ಷಮಿಸಿ- ಡಾ. ಜಿ.ಕೆ. ಕಾಳೆ, ಹಿರಿಯ ವೈದ್ಯ
