November 9, 2026

*ನಾಡಿಗೆ ಬಸವಾದಿ ಶರಣರ ವಚನ ಸಾಹಿತ್ಯದ ಕೊಡುಗೆ ಅಪಾರ : ಸಾಹಿತಿ ಜಿ. ಎಸ್ ಗೋನಾಳ,,*

ಕುಕನೂರು : ಬಸವಾದಿ ಶರಣರು ವಚನಗಳ ಮೂಲಕ ನಾಡಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ವಚನಗಳು ಮನುಷ್ಯರನ್ನು ಅರಿವಿನೆಡೆಗೆ ಕೊಂಡ್ಯೊಯಲು ಸಹಕಾರಿಯಾಗಿವೆ ಎಂದು ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಂಸ್ಕೃತಿಕ ಪರಿಷತ್ತು ಜಿಲ್ಲಾಧ್ಯಕ್ಷ ಜಿ. ಎಸ್ ಗೋನಾಳ ಹೇಳಿದರು.

ಅವರು ಪಟ್ಟಣದ ಅನ್ನದಾನೀಶ್ವರ ಶಾಖಾ ಮಠದಲ್ಲಿ ಮನಿತ್ವಾ ಪ್ರಕಾಶನ ಹಾಗೂ ಕುಕನೂರು ತಾಲೂಕ ಚುಟುಕು ಸಾಹಿತ್ಯ ಪರಿಷತ್ ಘಟಕದ ಸಹಯೋಗದೊಂದಿಗೆ ಶಿಕ್ಷಕ ಬಸವರಾಜ ಉಪ್ಪಿನ ಅವರ ಚೊಚ್ಚಲು ಆಧುನಿಕ ವಚನಗಳ ಭಾವಬಯಲು ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಬಸವರಾಜ ಉಪ್ಪಿನವರು ತಮ್ಮ ಚೊಚ್ಚಲು ವಚನ ಪುಸ್ತಕದಲ್ಲಿ ಬಸವಾದಿ ಶರಣರ ಹಾದಿಯಲ್ಲಿ ಇಂದು ಆಧುನಿಕ ವಚನಗಳನ್ನು ರಚಿಸುವ ಮೂಲಕ ವಚನ ಅಧ್ಯಯನಕಾರರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ಪ್ರಯೋಗಿಸಿದ್ದಾರೆ ಎಂದರು.

ನಂತರ ಸಾನಿಧ್ಯವಹಿಸಿದ ಮಹಾದೇವ ಶ್ರೀಗಳು ಮಾತನಾಡಿ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಈ ಒಂದು ಪುಸ್ತಕ ನೀಡಿದ ಉಪ್ಪಿನ ಅವರ ಕಾರ್ಯ ಶ್ಲಾಘನೀಯವಾಗಿದೆ.

ಅದ್ಬುತವಾದ ಸರಳಿಕರಣ ವಚನಗಳನ್ನು ಜನ ಸಾಮಾನ್ಯರಿಗೆ ಅರ್ಥವಾಗವಂತೆ ಬರೆದಿದ್ದಾರೆ. ಬಸವಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಮನುಷ್ಯರನ್ನು ಅರಿವಿನೆಡೆಗೆ ಕೊಂಡ್ಯೂಯ್ದು, ಸಮಾಜ ಚಿಂತನೆ ಮೂಲಕ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ವಚನ ಎಂದರೇ ಮಾತುಗಳು ಅವುಗಳ ಮೂಲಕ ಜನರಿಗೆ ಅರಿವು ಮೂಡಿಸುವ ಕಾರ್ಯ ಶತಮಾನಗಳಿಂದಲೂ ನಡೆದು ಬಂದಿದ್ದು, ಇಂದಿನ ಯುವ ಪೀಳಿಗೆ ವಚನ ಸಾಹಿತ್ಯದ ಕಡೆ ಒಲವು ಹೊಂದಬೇಕು ಎಂದು ಕರೆ ನೀಡಿದರು.

ನಂತರ ಪ್ರಾಸ್ತಾವಿಕವಾಗಿ ಶಿಕ್ಷಕರು ಸಾಹಿತಿಗಳಾದ ಬಸವರಾಜ ಉಪ್ಪಿನವರು ಮಾತನಾಡಿ ಹಳ್ಳಿಯ ವ್ಯಕ್ತಿಯಾದ ನನಗೆ ಸಾಹಿತ್ಯದ ಬಗ್ಗೆ ಆಸಕ್ತಿ ಬಂದಿತು. ನಮ್ಮ ನಾಡಿಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದು ವಚನ ಸಾಹಿತ್ಯವಾಗಿದ್ದು, ನಾನು ಸಹ ಈ ವಚನ ಸಾಹಿತ್ಯಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ನನ್ನ ಭಾವನೆಗಳನ್ನು ವಚನಗಳ ಮೂಲಕ ಬಯಲಿಗೆಳೆದು, ಇಲ್ಲಿಯವರೆಗೆ ಸುಮಾರು 250ಕ್ಕೂ ಅಧಿಕ ವಚನಗಳನ್ನು ಬರೆದಿದ್ದು ಅದರಲ್ಲಿ ಪ್ರಥಮ ಬಾರಿಗೆ ಸರಳ ಭಾಷೆಯಲ್ಲಿ ಬರೆದಂತಹ 110 ವಚನ ಒಳಗೊಂಡಂತಹ ಪುಸ್ತಕವನ್ನು ಹೊರ ತಂದಿದ್ದೇನೆ. ಈ ಭಾವ ಬಯಲು ಆಧುನಿಕ ವಚನಗಳು ಸಾಮಾಜಿಕ ಬದುಕಿನ ಬೆಳಕು ಪ್ರಸರಿಸಲಿ ಎಂದು ಮನವಿ ಮಾಡಿದರು.

ಈ ನನ್ನ ಪುಸ್ತಕ ಲೋಕಾರ್ಪಣೆಗೆ ಸಹಕರಿಸಿದ ನನ್ನ ಎಲ್ಲಾ ಗುರುಗಳಿಗೆ, ಮಾರ್ಗದರ್ಶಕರಿಗೆ ಈ ಮೂಲಕ ಧನ್ಯವಾದಗಳು ಅರ್ಪಿಸುತ್ತಿದ್ದೇನೆ ಎಂದರು.

ಈ ವೇಳೆ ಹಿರಿಯ ಸಾಹಿತಿಗಳಾದ ಡಾ. ಕೆ. ಬಿ. ಬ್ಯಾಳಿ, ಸಾಹಿತಿ ಭೋಜರಾಜ ಸೊಪ್ಪಿಮಠ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಉಪನ್ಯಾಸಕ ಎಮ್. ಎಸ್ ಹಿರೇಮಠ ವಹಿಸಿಕೊಂಡಿದ್ದರು. ನಂತರ ಜಾನಪದ ಕಲಾವಿದರಿಂದ ಸಂಪ್ರದಾಯಿಕ ಸೋಬಾನೆ ಪದಗಳು ಜರುಗಿದವು.

ಈ ಸಂದರ್ಭದಲ್ಲಿ ರುದ್ರಪ್ಪ ಭಂಡಾರಿ, ಮಹೇಶ ಸಬರದ, ಉಮೇಶ ಕಂಬಳಿ, ಮಾರುತೇಶ ತಳವಾರ, ಪ್ರಭು ಶಿವನಗೌಡ್ರ, ಕಳಕಪ್ಪ ಕುಂಬಾರ, ಬಸವರಾಜ ಕೊಡ್ಲಿ, ಶರಣಪ್ಪ ಕೊಪ್ಪದ, ಆರ್. ಪಿ ರಾಜೂರು, ಫಕೀರಪ್ಪ ವಜ್ರಬಂಡಿ, ವೀರಯ್ಯ ಎಸ್ ಹಿರೇಮಠ ಸೇರಿದಂತೆ ಇನ್ನಿತರರು ಇದ್ದರು.

ಕಾರ್ಯಕ್ರಮದಲ್ಲಿ ಮೇಘರಾಜ ಜಿಡಗಿ ಪ್ರಾರ್ಥಿಸಿದರು, ಮುರಾರಿ ಬಜೇಂತ್ರಿ ಸಂಗೀತ ಸೇವೆ ನೀಡಿದರು, ವಸಂತಕುಮಾರ ಗುಡಿ ನಿರೂಪಿಸಿದರು, ರಾಣಿ ಹಳ್ಳಿ ಸ್ವಾಗತಿಸಿದರು, ರವಿ ಎಸ್ ಹಿರೇಮನಿ ವಂದಿಸಿದರು.

Leave a Reply

Your email address will not be published. Required fields are marked *