ಶಿವಾಜಿ ಹಾಗೂ ಬಸವಣ್ಣನವರ ರ ಆದರ್ಶಗಳು ಯುವಜನತೆಗೆ ದಾರಿದೀಪ: ವಿವೇಕರಾವ್ ಪಾಟೀಲ
ರಾಯಬಾಗ: ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಬಸವಣ್ಣನವರ ಮಹತ್ವದ ಚಿಂತನೆಗಳನ್ನು ಯುವಜನತೆ ಅಳವಡಿಸಿಕೊಂಡರೆ ಸಮಾಜದಲ್ಲಿ ನೈತಿಕತೆ, ಶಿಸ್ತು ಮತ್ತು ದೇಶಭಕ್ತಿ ಬೆಳೆಸಬಹುದು ಎಂದು ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ವಿವೇಕರಾವ್ ಪಾಟೀಲ ಹೇಳಿದರು.
ಪಟ್ಟಣದ ಅಂಬಾಭವಾನಿ ಮಂದಿರದಲ್ಲಿ ಭಾನುವಾರ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಬಸವಣ್ಣನವರ ಜಯಂತಿಯಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಶೌರ್ಯ ಮತ್ತು ಪ್ರಜಾಹಿತದ ಆಡಳಿತದ ಮೂಲಕ ಇತಿಹಾಸದಲ್ಲಿ ಅಜರಾಮರರಾಗಿದ್ದು, ಬಸವಣ್ಣನವರು ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು ಎಂದು ಹೇಳಿದರು.
ಇಬ್ಬರ ಆದರ್ಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ಯುವಕರು ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಉತ್ತಮ ಹಾಗೂ ಸುವ್ಯವಸ್ಥಿತ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ ಅಂಗಡಿ,ಶ್ರೀರಾಮ ಸೇನೆಯ ಮುಖಂಡರಾದ ಶಿವಾನಂದ ಬಂತೆ, ಜೈದೀಪ್ ದೇಸಾಯಿ, ಅಮಿತ ಹೊಂಕಳೆ, ಗಂಗಾರಾಮ ಪವಾರ, ಅಪ್ಪು ಪವಾರ, ರಮೇಶ ಕುಂಬಾರ, ಸಣ್ಮತಿ ಶೆಟ್ಟಿ, ರವಿ ತರಾಳ, ಸಿದ್ದು ದೇಸಾಯಿ, ಶ್ರೀನಾಥ ಜಾಧವ,ಮೇಘರಾಜ ಮಾಳಗಿ ಸೇರಿದಂತೆ ಇತರರು ಇದ್ದರು.
