ನವದೆಹಲಿ
• ನವದೆಹಲಿ: ಸಂಸತ್ ವಿಶೇಷ ಅಧಿವೇಶನದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಸೇರಿ ಮೂರು ಮಸೂದೆಗಳನ್ನು ಮಂಡಿಸಿದ್ದು, ಅವುಗಳ ಚರ್ಚೆಗೆ 15 ಗಂಟೆ ಸಮಯ ನಿಗದಿ ಮಾಡಿದೆ. ಶುಕ್ರವಾರ ಸಂಜೆ 4 ಗಂಟೆಗೆ ಮತದಾನ ನಡೆಯಲಿದೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಹೇಳಿದ್ದಾರೆ.
• ಲೋಕಸಭೆಯಲ್ಲಿ ಮಾತನಾಡಿದ ಅವರು, ಪ್ರಮುಖ ಮಸೂದೆಗಳ ಕುರಿತು ಸದನವು 15 ಗಂಟೆಗಳ ಕಾಲ ಚರ್ಚೆ ಮಾಡಲು ಸಮಯದ ನಿಗದಿ ಮಾಡಲಾಗಿದೆ. ಸದಸ್ಯರು ಹೆಚ್ಚಿನ ಸಮಯಕ್ಕೆ ಬೇಡಿಕೆ ಇಟ್ಟರೆ ಅದನ್ನು 18 ಗಂಟೆಗಳವರೆಗೆ ಸ್ಪೀಕರ್ ಅವರು ವಿಸ್ತರಿಸುವ ಸಾಧ್ಯತೆಯಿದೆ. ಮಧ್ಯರಾತ್ರಿಯವರೆಗೂ ಸಂಸತ್ ನಡೆಯಲಿದೆ. ನಾಳೆ ಸಂಜೆ 4 ಗಂಟೆಗೆ ಮಸೂದೆಗಳ ಅಂಗೀಕಾರಕ್ಕೆ ಮತದಾನ ನಡೆಯಲಿದೆ ಎಂದು ಹೇಳಿದ್ದಾರೆ.
ಸಂಸತ್ ವಿಶೇಷ ಅಧಿವೇಶನದಲ್ಲಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೆ ತರುವ ಮಸೂದೆ, ಕ್ಷೇತ್ರ ಪುರ್ನವಿಂಗಡೆ ಪ್ರಕ್ರಿಯೆ ಕಾಯ್ದೆ ಸೇರಿ ಮೂರು ಮಸೂದೆಗಳನ್ನು ಮಂಡಿಸಿದ್ದು, 131ನೇ ಸಾಂವಿಧಾನಿಕ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
• ಮಹಿಳಾ ಮೀಸಲಾತಿ ಕಾನೂನು ತಿದ್ದುಪಡಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಆಯೋಗವನ್ನು ಸ್ಥಾಪಿಸುವ ಬಗ್ಗೆ ಇರುವ ಮೂರು ಮಸೂದೆಗಳ ಮೇಲೆ ಶುಕ್ರವಾರ ಸಂಜೆ 4 ಗಂಟೆಗೆ ಲೋಕಸಭೆಯಲ್ಲಿ ಮತದಾನ ನಡೆಯಲಿದೆ ಎಂದು ಸ್ಪೀಕರ್ ಓಂ ಬಿರ್ಲಾ ಪ್ರಕಟಿಸಿದ್ದಾರೆ.
• ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಗುರುವಾರ ಆರಂಭದ ದಿನವೇ ತೀವ್ರ ರಾಜಕೀಯ ವಾಗ್ವಾದ, ಕೋಲಾಹಲ ಉಭಯ ಸದನಗಳಲ್ಲಿ ಕಂಡುಬಂದಿತು. ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘಾವಲ್ ಮತ್ತು ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಲು ಹಾಗೂ ಕ್ಷೇತ್ರ ಪುನರ್ವಿಂಗಡಣೆ ಆಯೋಗ ರಚನೆಗೆ ಸಂಬಂಧಿಸಿದ ಮೂರು ಮಸೂದೆಗಳನ್ನು ಮಂಡಿಸಿದರು. ಇದಕ್ಕೆ ವಿರೋಧ ಪಕ್ಷಗಳು “ಸಂವಿಧಾನ ವಿರೋಧಿ” ಎಂದು ಪ್ರತಿಭಟನೆ ನಡೆಸಿದವು.
• ಈ ವಿವಾದದ ಕೇಂದ್ರಬಿಂದು ಕ್ಷೇತ್ರ ಮರುವಿಂಗಡಣೆ ಆಗಿದ್ದು, ಇದರಿಂದ ದಕ್ಷಿಣ ರಾಜ್ಯಗಳ ಪ್ರತಿನಿಧಿತ್ವ ಕಡಿಮೆಯಾಗಿ ಉತ್ತರ ರಾಜ್ಯಗಳಿಗೆ ಹೆಚ್ಚು ಲಾಭವಾಗುತ್ತದೆ ಎಂದು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಮಹಿಳಾ ಮೀಸಲಾತಿ ಜಾರಿಗೆ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಸಂಬಂಧ ಹಾಕಬಾರದು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
