ನವದೆಹಲಿಯ ಕರ್ನಾಟಕ ಭವನದಲ್ಲಿ ಸೋಮವಾರ ಸಿಎಂ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಸಂಸದರ ಜೊತೆಗಿನ ಸಭೆಯಲ್ಲಿ ಈ ಯೋಜನೆಗಳ ಅನುಮೋದನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಲಾಯಿತು.
ನವದೆಹಲಿ: ಜಲಸಂಪನ್ಮೂಲ ಇಲಾಖೆಯನ್ನು ಹೊರತುಪಡಿಸಿ ಕೇಂದ್ರ ಸರ್ಕಾರದಿಂದ ಬಾಕಿ ಇರುವ ಪ್ರಮುಖ ಯೋಜನೆಗಳಿಗೆ ಅನುಮೋದನೆ, ಅನುದಾನಗಳು ಸೇರಿದಂತೆ ಒಟ್ಟು 13 ಅಂಶಗಳ ಬಗ್ಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಸಚಿವರು ಹಾಗೂ ರಾಜ್ಯದ ಸಂಸದರ ಜತೆ ಚರ್ಚೆ ನಡೆಸಿದರು.
ನವದೆಹಲಿಯ ಕರ್ನಾಟಕ ಭವನದಲ್ಲಿ ಸೋಮವಾರ ಸಿಎಂ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಸಂಸದರ ಜೊತೆಗಿನ ಸಭೆಯಲ್ಲಿ ಈ ಯೋಜನೆಗಳ ಅನುಮೋದನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಲಾಯಿತು.
“ರಾಜ್ಯದ ವಿವಿಧ ವಿಧೇಯಕಗಳಿಗೆ ಅನುಮೋದನೆ ಸೇರಿದಂತೆ ಗ್ರಾಮ ಪಂಚಾಯತಿಗಳ ಅನುದಾನ, ಸಾಗರಮಾಲ 2.0 ಯೋಜನೆಗಳು, ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ, ರಕ್ಷಣಾ ಇಲಾಖೆಯ ಭೂಮಿ ರಾಜ್ಯ ಸರ್ಕಾರಕ್ಕೆ ವರ್ಗಾವಣೆ, ಬೆಂಗಳೂರು ರಿಂಗ್ ರಸ್ತೆ, ಕೋಲಾರ ರೈಲ್ವೆ ಕೋಚ್ ಕಾರ್ಖಾನೆ, ಬೆಂಗಳೂರು ಉಪನಗರ ರೈಲು ಯೋಜನೆ, ಬೆಂಗಳೂರು–ಮುಂಬೈ ಅತಿ ವೇಗದ ರೈಲು ಮಾರ್ಗ, HAL ವಿಮಾನ ನಿಲ್ದಾಣವನ್ನು ವಾಣಿಜ್ಯ ಬಳಕೆಗೆ ಪುನರಾರಂಭಿಸುವುದು, ರಾಯಚೂರಿನಲ್ಲಿ AIIMS ಸ್ಥಾಪನೆ, ತೆಂಗು ಮತ್ತು ಅಡಿಕೆ ಬೆಳೆಗಳ ಕೀಟ ನಿಯಂತ್ರಣ, ಪೊಲೀಸ್ ಆಧುನೀಕರಣದ ಬಗ್ಗೆ ಗಮನ ಹರಿಸುವಂತೆ ಸಭೆಯಲ್ಲಿ ಕೋರಲಾಯಿತು.
ಸಭೆಯಲ್ಲಿ ಚರ್ಚೆಯಾದ ಅಂಶಗಳ ವಿವರಗಳು:
15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ ಬಿಡುಗಡೆ : 2025–26ನೇ ಸಾಲಿನ 15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ. 2025–26ನೇ ಸಾಲಿಗೆ 15ನೇ ಹಣಕಾಸು ಆಯೋಗವು ₹2,186.20 ಕೋಟಿ ನೆರವು ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರವು ಈ ಮೊತ್ತವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಪಂಚಾಯತ್ ರಾಜ್ ಸಚಿವಾಲಯದೊಂದಿಗೆ ನಿರಂತರ ಅನುಸರಣೆ ನಡೆಸಿ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯವರು ಹಲವು ಬಾರಿ ಪತ್ರ ಬರೆದಿದ್ದು, 11.03.2026ರಂದು ಕೇಳಲಾದ ಪ್ರಶ್ನೆಗಳಿಗೆ 25.03.2026ರಂದು ವಿವರವಾಗಿ ಉತ್ತರಿಸಲಾಗಿದೆ. ಜೊತೆಗೆ ಮುಖ್ಯ ಕಾರ್ಯದರ್ಶಿಯವರು 04.04.2026ರಂದು ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಯವರು ಸಹ 25.02.2026 ಹಾಗೂ 06.04.2026ರಂದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು 19.01.2026, 02.07.2026 ಹಾಗೂ 15.07.2026ರಂದು ಸಂಬಂಧಿತ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.
